ಹವೆ ಮತ್ತು ವಾಯುಗುಣ-
	ಉಷ್ಣ ಅಥವಾ ಶೈತ್ಯ, ಆದ್ರ್ರತೆ ಅಥವಾ ಶುಷ್ಕತೆ, ವಾಯು ನಿಶ್ಚಲತೆ ಅಥವಾ ಬೀಸುವಿಕೆ ಮತ್ತು ಮೋಡ ಕವಿದಿರುವಿಕೆ ಅಥವಾ ಇಲ್ಲದಿರುವಿಕೆ ಇವಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ನಿರ್ದಿಷ್ಟ ಸ್ಥಳ ಹಾಗೂ ಕಾಲದಲ್ಲಿ ವಾಯುಮಂಡಲದ ಸ್ಥಿತಿಯೇ ಹವೆ (ವೆದರ್). ಸಾಕಷ್ಟು ದೀರ್ಘ ಕಾಲ (ಸಾಮಾನ್ಯವಾಗಿ ಕನಿಷ್ಠ 30 ವರ್ಷ) ಒಂದು ಪ್ರದೇಶದ ಹವೆಯನ್ನು ಅಧ್ಯಯಿಸಿ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ಆ ಪ್ರದೇಶದ ಹವಾಪ್ರರೂಪದ ವಿಶಿಷ್ಟತೆಯನ್ನು ವರ್ಣಿಸಲು ಬಳಸುವ ಪರಿಕಲ್ಪನೆಯೇ ವಾಯುಗುಣ (ಕ್ಲೈಮೆಟ್). ವಾಯುಗುಣ ಎಂಬುದು ಸರಾಸರಿ ಹವೆ (ಈ ಅಪರಿಪೂರ್ಣ ವ್ಯಾಖ್ಯಾನ ಈಗ ಬಳಕೆಯಲ್ಲಿಲ್ಲ) ಅಷ್ಟೇ ಅಲ್ಲ. ಹವೆಯ ಘಟಕಗಳ ಸರಾಸರಿ ಮೌಲ್ಯಗಳೊಂದಿಗೆ ಅವುಗಳಲ್ಲಿ ಆಗುವ ವ್ಯತ್ಯಯಗಳ ವ್ಯಾಪ್ತಿ ಹಾಗೂ ವಿವಿಧ ವಿದ್ಯಮಾನಗಳ ಘಟಿಸುವಿಕೆಯ ಆವೃತ್ತಿಯೂ ಈ ಪರಿಕಲ್ಪನೆಯಲ್ಲಿ ಸೇರಿವೆ.  
  
	ಹವೆಯ ಪ್ರಮುಖ ಪ್ರಮಿತಿಗಳು: 1. ತಾಪ. ತಾಪಮಾಪಕದಿಂದ ಅಳತೆ; 2. ಗಾಳಿಯ ವೇಗ. ವಾಯುವೇಗ ಮಾಪಕದಿಂದ ಅಳತೆ; 3. ಗಾಳಿಯ ದಿಕ್ಕು, ಅರ್ಥಾತ್ ಮಾರುತ. ಯಾವ ದಿಕ್ಕಿನಿಂದ ಗಾಳಿ ಬೀಸುತ್ತಿದೆ ಎಂಬುದರ ವಿವರಣೆ; 4. ಆದ್ರ್ರತೆ ಅಥವಾ ವಾಯುವಿನಲ್ಲಿಯ ತೇವಾಂಶ. ಆದ್ರ್ರತಾಮಾಪಕದಿಂದ ಅಳತೆ; 5.  ವಾಯು ಸಂಮರ್ದ. ವಾಯುಭಾರಮಾಪಕದಿಂದ ಅಳತೆ; 6. ಅವಪತನ. ಮಳೆ, ಹಿಮ, ಮಂಜು, ಇಬ್ಬನಿ ಇವುಗಳ ಪರಿಭಾಷೆಯಲ್ಲಿ ವರ್ಣನೆ; 7. ಮೋಡ ಕವಿದಿರುವಿಕೆ, ಬಗೆ, ದಟ್ಟಣೆ ಇವುಗಳ ಪರಿಭಾಷೆಯಲ್ಲಿ ವರ್ಣನೆ; 8. ಸಂವೇದನೆ. ಮರಗಟ್ಟಿಸುವ ಚಳಿ, ಕೊರೆಯುವ ಚಳಿ, ತಂಪು, ಸುಡುಬಿಸಿಲು ಇವೇ ಮೊದಲಾದ ತಾಪಾಧಾರಿತ ಪರಿಕಲ್ಪನೆಗಳ ಪರಿಭಾಷೆಯಲ್ಲಿ ವರ್ಣನೆ.

	ಯಾವುದೇ ಪ್ರದೇಶದ ವಾಯುಗುಣವನ್ನು ಬಹುತೇಕ ನಿರ್ಧರಿಸುವ ಆ ಪ್ರದೇಶದ ಭೌಗೋಳಿಕ ನೆಲೆಗೆ ಸಂಬಂಧಿಸಿದ ಪ್ರಮುಖ ಅಂಶಗಳು ಇಂತಿವೆ: 

	1. ಅಕ್ಷಾಂಶ: ಸಮಭಾಜಕ ವೃತ್ತದ ಸಮೀಪದ ಪ್ರದೇಶಗಳಿಗೆ ಉಷ್ಣರೂಪದಲ್ಲಿ ಹೆಚ್ಚು ಸೌರಶಕ್ತಿ ಲಭ್ಯ. ಆದ್ದರಿಂದ ದೂರ ಸರಿದಂತೆಲ್ಲ ಲಭ್ಯ ಸೌರಶಕ್ತಿಯ ಪರಿಮಾಣ ಕಡಿಮೆ ಆಗುತ್ತದೆ. ಸೂರ್ಯಕಿರಣಗಳ ಬಾಗುವಿನಲ್ಲಾಗುವ ವ್ಯತ್ಯಯವೇ ಇದರ ಕಾರಣ. (ಬಾಗು ಎಂಬ ಅರ್ಥವುಳ್ಳ ಗ್ರೀಕ್ ಪದ ಕ್ಲೈಮದಿಂದ ಕ್ಲೈಮೆಟ್ ಪದದ ವ್ಯುತ್ಪತ್ತಿ) 

2. ದೊಡ್ಡ ಜಲರಾಶಿಗಿರುವ (ಉದಾ: ಸಮುದ್ರ) ದೂರ: ನಿರ್ದಿಷ್ಟ ತಾಪಕ್ಕೇರಲು ನೀರು ಅಪಶೋಷಿಸಬೇಕಾದ ಉಷ್ಣಪರಿಮಾಣ ಹಾಗೂ ಅದರ ಉಷ್ಣಧಾರಣಸಾಮಥ್ರ್ಯ ಭೂಮಿಯದಕ್ಕಿಂತ ಹೆಚ್ಚು. ತತ್ಪರಿಣಾಮವಾಗಿ ಜಲರಾಶಿ ಬೇಸಗೆಯಲ್ಲಿ ಆಸುಪಾಸಿನ ಭೂಪ್ರದೇಶಕ್ಕಿಂತ ತಂಪಾಗಿಯೂ ಚಳಿಗಾಲದಲ್ಲಿ ಬಿಸಿಯಾಗಿಯೂ ಇರುತ್ತದೆ. ಅಷ್ಟೇ ಅಲ್ಲದೆ, ಜಲರಾಶಿಯ ಮೇಲಿನಿಂದ ಭೂಪ್ರದೇಶದ ಕಡೆಗೆ ಬೀಸುವ ಗಾಳಿಯಲ್ಲಿ ತೇವಾಂಶವಿರುತ್ತದೆ. ಭೂಪ್ರದೇಶದ ಮೇಲಾಗುವ ಇವುಗಳ ಒಟ್ಟಾರೆ ಪರಿಣಾಮ ಜಲರಾಶಿಯಿಂದ ಆ ಪ್ರದೇಶಕ್ಕಿರುವ ದೂರವನ್ನು ಅವಲಂಬಿಸಿದೆ. 

	3. ಮಾರುತಗಳು: ಭೂಮಾರುತಗಳು ಉದ್ಭವಿಸುವುದು ಸಮಭಾಜಕದ ಬಳಿಯಾದರೂ ಭೂಮಿಯ ಪ್ರತಿಯೊಂದು ಪ್ರದೇಶದಲ್ಲಿಯೂ ನಿರ್ದಿಷ್ಟ ಪ್ರರೂಪದ ಮಾರುತಗಳಿರುತ್ತವೆ. ಭೂ ಅಕ್ಷದ ಬಾಗು ಮತ್ತು ಪರಿಭ್ರಮಣೆ ಮಾರುತವನ್ನು ಪ್ರಭಾವಿಸುವ ಎರಡು ಪ್ರಮುಖ ಕಾರಕಗಳು. ಯಾವುದೇ ಪ್ರದೇಶದ ಮೇಲೆ ಬೀಸುವ ಮಾರುತಗಳು ಯಾವ ದಿಕ್ಕಿನಿಂದ ಯಾವ ಪ್ರದೇಶದ ಮೇಲೆ ಹಾಯ್ದು ಬೀಸುತ್ತಿದೆ ಎಂಬ ಅಂಶ ಆ ಪ್ರದೇಶದ ವಾಯುಗುಣವನ್ನು ಪ್ರಭಾವಿಸುತ್ತದೆ. 

	4. ಎತ್ತರ: ಸಮುದ್ರಪಾತಳಿಯಿಂದ ಆ ಪ್ರದೇಶ ಎಷ್ಟು ಎತ್ತರದಲ್ಲಿದೆ ಅಥವಾ ಪ್ರದೇಶದ ಉನ್ನತಿ. ಪ್ರದೇಶದ ಉನ್ನತಿ ಅಲ್ಲಿಯ ತಾಪವನ್ನು ಪ್ರಭಾವಿಸುತ್ತದೆ. ಸಾಪೇಕ್ಷವಾಗಿ, ಅಧಿಕ ಔನ್ನತ್ಯದ ಪ್ರದೇಶಗಳಲ್ಲಿ ಅವಕ್ಷೇಪ ಪ್ರಮಾಣ ಹೆಚ್ಚು; ಸರಾಸರಿ ತಾಪ ಕಡಿಮೆ.

ಸಾಗರ ಪ್ರವಾಹಗಳು, ಪರ್ವತಶ್ರೇಣಿ ಹರಡಿರುವ ದಿಕ್ಕು, ಸೌರಕಲೆಗಳು, ಭೂಪರಿಭ್ರಮಣೆಯಿಂದಾಗಿ ಭೂಮಿ ಹಾಗೂ ಸೂರ್ಯನ ನಡುವಿನ ಅಂತರದಲ್ಲಿ ಆಗುವ ವ್ಯತ್ಯಯ, ಜ್ವಾಲಾಮುಖಿಗಳ ಕ್ರಿಯಾಶೀಲತೆಯ ಪ್ರಮಾಣ ಇವೇ ಮೊದಲಾದ ಇತರ ಅಂಶಗಳೂ ವಾಯುಗುಣವನ್ನು ಪ್ರಭಾವಿಸುತ್ತವೆ.

	ವಾಯುಗುಣ ವರ್ಗೀಕರಣ: ವೀಕ್ಷಿಸಬಹುದಾದ ಪ್ರಮಿತಿಗಳನ್ನು (ಉದಾ: ತಾಪ, ಅವಕ್ಷೇಪಣ) ಅಥವಾ ವಾಯುಗುಣದ ಪ್ರಧಾನ ಕಾರಕ ಅಥವಾ ಬಾಷ್ಪೀಭವನ-ಬಾಷ್ಪವಿಸರ್ಜನ ಸಾಧ್ಯತೆ (ಇವ್ಯಾಪೊಟ್ರ್ಯಾನ್‍ಸ್ಪಿರೇಶನ್ ಪೊಟೆನ್ಶಿಯಲ್) ಆಧರಿಸಿ ವಾಯುಗುಣವನ್ನು ವರ್ಗೀಕರಿಸುವ ಪ್ರಯತ್ನಗಳು ನಡೆದಿವೆ. ಈ ಪ್ರಯತ್ನಗಳ ಪೈಕಿ ಕೋಪೆನ್ ವರ್ಗೀಕರಣ ಹೆಚ್ಚು ಬಳಕೆಯಲ್ಲಿದೆ. ವರ್ಗೀಕರಿಸಲು ಕನಿಷ್ಠ ದತ್ತಾಂಶ ಮಾಹಿತಿಯನ್ನು (ತಾಪ ಮತ್ತು ಅವಕ್ಷೇಪಣಗಳ ಮಾಸಿಕ ಮತ್ತು ವಾರ್ಷಿಕ ಸರಾಸರಿಗಳು) ಬಳಸಿರುವುದೇ ಇದಕ್ಕೆ ಕಾರಣ. ಈ ಪದ್ಧತಿಯ ಪ್ರಕಾರ ವಾಯುಗುಣದಲ್ಲಿ ಐದು ಪ್ರಧಾನ ವರ್ಗಗಳಿವೆ (ವರ್ಗಗಳನ್ನು ಇಂಗ್ಲಿಷ್ ಅಕ್ಷರಗಳಿಂದ ಸೂಚಿಸುವುದು ವಾಡಿಕೆ): 

ಅ. ಆದ್ರ್ರ, ಮನ್ಸೂನು ಮತ್ತು ಆದ್ರ್ರ ಹಾಗೂ ಶುಷ್ಕ ಎಂಬ ಮೂರು ಉಪ ಪ್ರಭೇದಗಳುಳ್ಳ ಉಷ್ಣವಲಯದ ವಾಯುಗುಣ. ಸು. 150-250 ದಕ್ಷಿಣ ಮತ್ತು ಉತ್ತರ ಅಕ್ಷಾಂಶದ ವ್ಯಾಪ್ತಿ. ಕನಿಷ್ಠ ಸರಾಸರಿ ತಾಪ 180 ಸೆ.ಗಿಂತ ಹೆಚ್ಚು. 1,500 ಮಿಮೀಗಿಂತ ಅಧಿಕ ವಾರ್ಷಿಕ ಅವಕ್ಷೇಪ. 

ಆ. ಶುಷ್ಕ ಬೆಂಗಾಡು (ಮರುಭೂಮಿ) ಮತ್ತು ಶುಷ್ಕ ಅರೆಬೆಂಗಾಡು (ಹುಲ್ಲುಗಾವಲು) ಎಂಬ ಎರಡು ಉಪಪ್ರಭೇದಗಳುಳ್ಳ ಶುಷ್ಕ ವಾಯುಗುಣ. ಬಾಷ್ಪೀಭವನ ಮತ್ತು ಬಾಷ್ಪವಿಸರ್ಜನ ಸಾಧ್ಯತೆ ಅವಕ್ಷೇಪಣ ಪ್ರಮಾಣಕ್ಕಿಂತ ಅಧಿಕವಾಗಿರುವುದು ಇದರ ವಿಶಿಷ್ಟತೆ. ಸು. 200-350 ಉತ್ತರ ಮತ್ತು ದಕ್ಷಿಣ ಅಕ್ಷಾಂಶಗಳಿಂದ ಆರಂಭವಾಗುವ ಬಲು ವಿಸ್ತಾರವಾದ ಪ್ರದೇಶದಲ್ಲಿ (ಭೂಭಾಗದ 26% ಭಾಗ) ಈ ವಾಯುಗುಣವಿದೆ. ಬಹುಭಾಗ ಪರ್ವತಶ್ರೇಣಿಗಳಿಂದ ಆವೃತವಾಗಿದೆ. 

	ಇ. ಆದ್ರ್ರ ಉಪೋಷ್ಣವಲಯ, ಮೆಡಿಟರೇನಿಯನ್ ಮತ್ತು ಸಾಗರಿಕ ಎಂಬ ಮೂರು ಪ್ರಭೇದಗಳುಳ್ಳ ಹಿತಕರ ಚಳಿಗಾಲಯುಕ್ತ ಮಧ್ಯ-ಅಕ್ಷಾಂಶ ತೇವಗೂಡಿದ ಅಥವಾ ಸಮಶೀತೋಷ್ಣ ವಾಯುಗುಣ. 300-500 ಉತ್ತರ ಮತ್ತು ದಕ್ಷಿಣ ಅಕ್ಷಾಂಶಗಳಿಂದ ಆರಂಭ. ಭೂಖಂಡಗಳ ಪೂರ್ವ ಮತ್ತು ಪಶ್ಚಿಮ ಗಡಿಪ್ರದೇಶಗಳ ಪ್ರಮುಖ ವಾಯುಗುಣ. ಬೆಚ್ಚನೆಯ ಆದ್ರ್ರ ಬೇಸಗೆ ಮತ್ತು ಹಿತಕರ ಚಳಿಗಾಲ. ಚಳಿಗಾಲದಲ್ಲಿ ಮಧ್ಯಾಕ್ಷಾಂಶ ಚಂಡಮಾರುತ; ಬೇಸಗೆಯಲ್ಲಿ ಸಂವಾಹಕ ಗುಡುಗುಮಳೆ ಇದರ ವಿಶಿಷ್ಟತೆ. 

ಡಿ. ಶುಷ್ಕ ಚಳಿಗಾಲ, ಶುಷ್ಕ ಬೇsಸಗೆ ಕಾಲ ಮತ್ತು ಸರ್ವಋತು ಆದ್ರ್ರ ಎಂಬ ಮೂರು ಉಪಪ್ರಭೇದಗಳುಳ್ಳ ಭೂಖಂಡ ಮಧ್ಯಾಕ್ಷಾಂಶ ಆದ್ರ್ರ ಅಥವಾ ಶೀತಲ ವಾಯುಗುಣ. ಅ ಪ್ರಭೇದದ ವಾಯುಗುಣ ಪ್ರದೇಶದ ಗಡಿಯಿಂದ ಧ್ರುವದತ್ತ ಕಂಡುಬರುವ ವಾಯುಗುಣ. ಬೆಚ್ಚನೆಯ, ತಂಪಾದ ಎನ್ನಬಹುದಾದ ಬೇಸಗೆ, ಶೀತಲ ಚಳಿಗಾಲ ಇದರ ವೈಶಿಷ್ಟ್ಯ. ಅತಿ ಬೆಚ್ಚನೆಯ ಮಾಸದ ಸರಾಸರಿ ತಾಪ 100 ಸೆ. ಕೊಂಚ ಹೆಚ್ಚು; ಚಳಿಗಾಲದ್ದು -300 ಸೆ.ಗಿಂತ ಕಡಿಮೆ. ಹಿಮ-ಚಂಡಮಾರುತಗಳು, ಅಧಿಕ ವೇಗದ ಗಾಳಿ, ತೀವ್ರ ಚಳಿ ಇವು ಚಳಿಗಾಲದ  ಸಾಮಾನ್ಯ ಲಕ್ಷಣ. 

	ಉ. ಧ್ರುವೀಯ ತಂಡ್ರಾ ಮತ್ತು ಧ್ರುವೀಯ ಟೊಪ್ಪಿ ಎಂಬ ಎರಡು ಉಪಪ್ರಭೇದಗಳುಳ್ಳ ಧ್ರುವೀಯ ವಾಯುಗುಣ. ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶ, ಉತ್ತರ ಅಮೆರಿಕ, ಯುರೋಪ್ ಮತ್ತು ಏಷ್ಯ ಖಂಡಗಳ ಉತ್ತರ ಕರಾವಳಿ ಹಾಗೂ ಗ್ರೀನ್‍ಲೆಂಡ್‍ನ ವಾಯುಗುಣ. ಅತಿ ಬೆಚ್ಚನೆಯ ಮಾಸದ ಸರಾಸರಿ ತಾಪ 100 ಸೆ. ಮೀರುವುದಿಲ್ಲ.

ಹವೆ ಮತ್ತು ವಾಯುಗುಣವನ್ನು ವೈಜ್ಞಾನಿಕವಾಗಿ ಅಧ್ಯಯಿಸಿ ನಿಖರವಾದ ಹವಾ ಮುನ್ಸೂಚನೆ ನೀಡಲು ಯತ್ನಿಸುವ ಜ್ಞಾನಶಾಖೆ ಪವನ ವಿಜ್ಞಾನ.						
				(ಸಿ.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ